ಪೆಲಪನೀಸಿಯನ್ ಯುದ್ಧ		
ಕ್ರಿ. ಪೂ. 431-404. ಪ್ರಾಚೀನ ಗ್ರೀಸಿನಲ್ಲಿ ದೀರ್ಘ ಶತ್ರುಗಳಾಗಿದ್ದ ಅತೆನ್ಸ್ ಮತ್ತು ಸ್ಪಾರ್ಟಗಳ ನಡುವೆ ನಡೆದ ಯುದ್ಧ. ಆಶ್ರಿತ ರಾಜ್ಯಗಳ ಒಡೆತನಕ್ಕಾಗಿ ಸ್ಪಾರ್ಟದ ಮಿತ್ರ ರಾಜ್ಯವಾದ ಕಾರಿಂತ್‍ಗೂ ಅತೆನ್ಸ್‍ಗೂ ನಡೆದ ಬಡಿದಾಟವೇ ಯುದ್ಧಕ್ಕೆ ಕಾರಣ. ಕ್ರಿ. ಪೂ. 431ರಲ್ಲಿ ಸ್ಪಾರ್ಟದ ಸೈನ್ಯ ಆಟಿಕಕ್ಕೆ ಮುತ್ತಿಗೆ ಹಾಕಿತು. ಅತೆನ್ಸ್‍ನ ನೌಕೆ ಸ್ಪಾರ್ಟದ ಮಿತ್ರ ರಾಜ್ಯಗಳ ಮೇಲೆ ದಾಳಿ ಮಾಡಿ ವಿಜಯ ಗಳಿಸಿತು. ಆ ವೇಳೆಗೆ ಸಂಭವಿಸಿದ ಪ್ಲೇಗಿನಿಂದಾಗಿ ಅತೆನ್ಸಿನ ಕಾಲು ಸಂಖ್ಯೆಯ ಜನ ಪ್ರಾಣಬಿಟ್ಟರು. ಪೆರಿಕ್‍ಲ್ಸ್ ತೀರಿಕೊಂಡ. ಆದರೂ, ಅತೆನ್ಸ್ ಜಗ್ಗಲಿಲ್ಲ. ಸ್ಪಾರ್ಟದ ಶಾಂತಿಯ ಬಯಕೆಯನ್ನು ಅದು ತಳ್ಳಿ ಹಾಕಿತು. ಆದರೆ, ಅನಂತರ ಪರಿಸ್ಥಿತಿ ಬದಲಾಯಿತು. ಸೇನಾನಿ ಬ್ರ್ಯಾಸಿಡಾಸನ ನಾಯಕತ್ವದಲ್ಲಿ ಸ್ಪಾರ್ಟ ಹೋರಾಟ ಮುಂದುವರಿಸಿತು. ಆಂಫಿಪೊಲಿಸ್‍ನಲ್ಲಿ ನಡೆದ ಕದನದಲ್ಲಿ (ಕ್ರಿ. ಪೂ. 424) ಸ್ಪಾರ್ಟನರು ಜಯಗಳಿಸಿದರು. ಅತೆನ್ಸ್ ನಾಯಕ ನಿಸಿಯಾಸ್ ಶಾಂತಿ ಮಾಡಿಕೊಂಡ. ಆದರೆ, ಈ ಶಾಂತಿ ಬಹುಕಾಲ ಉಳಿಯಲಿಲ್ಲ. ಅತೆನ್ಸ್ ಸೇನಾನಿ ಅಲ್ಸಿಬಿಯಾಡೀಸ್‍ನ ಪ್ರಚೋದನೆಯಿಂದ ಸ್ಪಾರ್ಟದ ಮಿತ್ರ ರಾಜ್ಯಗಳು ದಂಗೆಯೆದ್ದವು. ಸಿರಾಕ್ಯೂಸಿನ ಮೇಲೆ ದಂಡೆತ್ತಿ ಹೋಗಲು ಅವನು ಹವಣಿಸಿದ. ಪವಿತ್ರ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆಪಾದನೆಗೆ ಅವನು ಗುರಿಯಾದ. ನಿಸಿಯಾಸ್ ಕೈಗೊಂಡ ದಂಡಯಾತ್ರೆ ಅನಾಹುತದಲ್ಲಿ ಪರ್ಯಾವಸಾನಗೊಂಡಿತು. (ಕ್ರಿ. ಪೂ. 413). ಅಲ್ಸಿಬಿಯಾಡೀಸ್ ಸ್ಪಾರ್ಟಕ್ಕೆ ಹೋಗಿ, ನೌಕಾಸೈನ್ಯವೊಂದನ್ನು ನಿರ್ಮಿಸಲು ಅದಕ್ಕೆ ಸಹಾಯ ಮಾಡಿದ. ಅವನು ಮತ್ತೆ ಅತೆನ್ಸ್‍ಗೆ ಹಿಂತಿರುಗಿ ಸ್ಪಾರ್ಟನರ ಮೇಲೆ ಯುದ್ಧ ಮಾಡಿ ಗೆದ್ದ. ಆದರೆ, ಲಿಸಾಂಡರ್ ಎಂಬವನ ನಾಯಕತ್ವದಲ್ಲಿ ಸ್ಪಾರ್ಟ ಪ್ರಬಲವಾಯಿತು. ಆದರೂ ಹೊಸ ನೌಕಾಸೈನ್ಯ ಕ್ರಿ. ಪೂ. 407ರಲ್ಲಿ (?) ನೋಷಿಯಮ್ ಎಂಬಲ್ಲಿ ಜಯ ಗಳಿಸಿತು. ಆರ್ಜಿನೂಸೀ ದ್ವೀಪಸ್ತೋಮ ಪ್ರದೇಶದಲ್ಲಿ ನಡೆದ ನೌಕಾ ಕದನದಲ್ಲಿ ಅತೆನ್ಸ್ ಗೆದ್ದಿತಾದರೂ ಏಜಸ್ಪಾಟಮಾಸ್‍ನಲ್ಲಿ ಅತೆನ್ಸ್ ನೌಕಾಬಲಕ್ಕೆ ಸ್ಪಾರ್ಟನರು ಭಾರಿ ಪೆಟ್ಟು ಕೊಟ್ಟರು (ಕ್ರಿ. ಪೂ. 405). ಕ್ರಿ. ಪೂ. 404ರಲ್ಲಿ ಅತೆನ್ಸ್ ಶರಣಾಯಿತು. ಅದು ಮತ್ತೆ ತನ್ನ ಹಳೆಯ ವೈಭವವನ್ನು ಗಳಿಸಲಿಲ್ಲ. ಮುಂದೆ ಸ್ವಲ್ಪ ಕಾಲ ಸ್ಪಾರ್ಟ ಗ್ರೀಸಿನ ರಾಣಿಯಾಗಿ ಮೆರೆಯಿತು. ಹೀಗೆ ಪೆಲಪನೀಸಿಯನ್ ಯುದ್ಧ ಅತೆನ್ಸಿನ ಪ್ರಾಬಲ್ಯವನ್ನು ಮುರಿಯುವುದಕ್ಕೆ ಕಾರಣವಾಯಿತು. ಪ್ರತಿಯೊಂದು ರಾಜ್ಯವೂ ಅತೆನ್ಸಿನ ನಾಯಕತ್ವವನ್ನು ಸಹಿಸದೆ ಕರುಬುತ್ತಿದ್ದವು ಕಾರಿಂತಿಯ ಅತೆನ್ಸಿನ ವಾಣಿಜ್ಯ ಶತ್ರು. ಸ್ಪಾರ್ಟ ಅತೆನ್ಸ್ ರಾಜ್ಯದ ಪ್ರಗತಿಗೆ ವಿರೋಧ ತೋರಿಸಿತು. ತನ್ನ ಸೇನಾ ಬಲದಿಂದ ನಾಯಕತ್ವ ಪಡೆಯಬೇಕೆಂದು ಸ್ಪಾರ್ಟ ಆಶಿಸಿತು. ಇತರ ಕೆಲವು ರಾಜ್ಯಗಳು ಅತೆನ್ಸಿನ ರಾಜಕೀಯ ದಬ್ಬಾಳಿಕೆಯನ್ನು ನಿರ್ಮೂಲ ಮಾಡಬೇಕೆಂದು ಗುಟ್ಟಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದವು. 

ಹೀಗೆ ಇತರ ರಾಜ್ಯಗಳ ದ್ವೇಷಾಸೂಯೆಗಳ ಫಲವಾಗಿ ಅತೆನ್ಸ್ ಅವನತಿಗೆ ಈಡಾಯಿತು. ಅದು ತನ್ನ ನಾಯಕತ್ವವನ್ನು ಕಳೆದುಕೊಂಡು ಗ್ರೀಸಿನ ಎರಡನೆಯ ದರ್ಜೆಯ ರಾಜ್ಯವಾಗಿ ಪರಿಣಮಿಸಿತು.

ಒಂದು ರೀತಿಯಲ್ಲಿ ಈ ಯುದ್ಧವೂ ಮೂಲ ತತ್ತ್ವಗಳ ಭಿನ್ನತೆಯ ಫಲವಾದ ಯುದ್ಧವಾಗಿತ್ತು. ಇದು ಎರಡು ಬೇರೆ ಕುಲಗಳ, ಎರಡು ಬೇರೆ ರಾಜ್ಯವ್ಯವಸ್ಥೆಗಳ ಯುದ್ಧ; ಅಯೋನಿಯನ್ ಮತ್ತು ಡೋರಿಯನರ ನಡುವೆ, ಪ್ರಜಾಪ್ರಭುತ್ವ ಮತ್ತು ಶ್ರೀಮಂತರ ಪ್ರಭುತ್ವದ ನಡುವೆ ನೌಕಾಶಕ್ತಿ ರಾಜ್ಯ ಮತ್ತು ಭೂಶಕ್ತಿಯ ರಾಜ್ಯದ ನಡುವೆ ನಡೆದ ಯುದ್ಧ. ಅತೆನ್ಸ್ ರಾಜ್ಯದ ನಾಯಕತ್ವ ಅಯೋನಿಯನ್ನರದು ಸ್ಪಾರ್ಟದ ನಾಯಕತ್ವ ಡೋರಿಯನರದು. ಅತೆನ್ಸ್ ಪ್ರಜಾಪ್ರಭುತ್ವದ ಬೀಡಾಗಿತ್ತು. ಸ್ಪಾರ್ಟ ತನ್ನ ಸೇನಾಬಲದಿಂದ ಭೂ ಪ್ರದೇಶದಲ್ಲಿ ತನ್ನ ಶಕ್ತಿಯನ್ನು ಹರಡಿತು. ಭೂ ಸೇನಾ ಬಲದ ರಾಜ್ಯ ತನ್ನ ಶತ್ರುವಿನ ಸಮುದ್ರ ಪ್ರದೇಶದ ಮೇಲೆ ದಂಡಯಾತ್ರೆ ಮಾಡಿತು. ನೌಕಾ ಸೇನಾಬಲದ ರಾಜ್ಯ ತನ್ನ ಶತ್ರುವಿನ ಸಮುದ್ರ ಪ್ರದೇಶದ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿತು. ಆಟಿಕ, ತ್ರೇಸ್, ಪಶ್ಚಿಮ ಗ್ರೀಸ್ ಇವೇ ಈ ಯುದ್ಧದ ಮುಖ್ಯ ರಂಗಭೂಮಿಗಳಾಗಿದ್ದವು. 	(ಬಿ.ಎಸ್.ಕೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ